ಮರಲೆ
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ತಾಲ್ಲೂಕಿನ ಒಂದು ಗ್ರಾಮ. ಕಸಬೆಯಿಂದ ಆಗ್ನೇಯಕ್ಕೆ 14 ಕಿಮೀ ದೂರದಲ್ಲಿದೆ. ಇಲ್ಲಿ ಹೊಯ್ಸಳರ ಕಾಲದ ಚೆನ್ನಕೇಶವ ಹಾಗೂ ಸಿದ್ಧೇಶ್ವರ ದೇವಾಲಯಗಳಿವೆ. ಈ ದೇವಾಲಯಗಳನ್ನು 1130ರಲ್ಲಿ ಹೊಯ್ಸಳ ವಿಷ್ಣುವರ್ಧನನ ದಂಡನಾಯಕರಲ್ಲಿ ಒಬ್ಬನಾದ ರಾಯಣ್ಣ ದಂಡನಾಥ ಎಂಬುವನು ಕಟ್ಟಿಸಿದನೆಂದು ಹೇಳಲಾಗಿದೆ. ದೇವಾಲಯದಲ್ಲಿರುವ ಒಂದು ಶಾಸನದಲ್ಲಿ ಹೊಯ್ಸಳ ವಿಷ್ಣುವರ್ಧನ 1130ರಲ್ಲಿ ಈ ದೇವಾಲಯಗಳಿಗೆ ಭೇಟಿಯಿತ್ತ ವಿಷಯ ನಿರೂಪಿತವಾಗಿವೆ, ಈ ಎರಡೂ ದೇವಾಲಯಗಳ ವಿನ್ಯಾಸ ಒಂದೇ ರೀತಿ ಇದ್ದು ಗರ್ಭಗೃಹ, ಸುಕನಾಸಿ, ನವರಂಗ, ಮುಖಮಂಟಪಗಳನ್ನು ಹೊಂದಿವೆ. ಈ ದೇವಾಲಯಗಳು ಆದಿ ಹೊಯ್ಸಳಶೈಲಿಯ ವಾಸ್ತು ಶಿಲ್ಪಕ್ಕೆ ಉದಾರಣೆಗಳಾಗಿವೆ.

	ಚೆನ್ನಕೇಶವ ದೇವಾಲಯ ಸಿದ್ಧೇಶ್ವರ ದೇವಾಲಯಕ್ಕಿಂತ ವಿಸ್ತಾರವಾಗಿಯೂ ಸುಂದರವಾಗಿಯೂ ಇದೆ. ದೇವಾಲಯದಲ್ಲಿರುವ ಮೂರ್ತಿ ಸುಮಾರು 1.54 ಮೀ. ಎತ್ತರವಿದ್ದು ಎರಡೂ ಪಕ್ಕಗಳಲ್ಲಿ ದೇವಿಯರ ವಿಗ್ರಹಗಳಿವೆ. ವಿಗ್ರಹದ ಹಿಂಭಾಗದಲ್ಲಿ ವಿಷ್ಣುವಿನ ದಶಾವತಾರಗಳನ್ನು ಚಿತ್ರಿಸಿರುವ ಪ್ರಭಾವಳಿ ಇದೆ. 

	ಸಿದ್ಧೇಶ್ವರ ದೇವಾಲಯದ ಸುಕನಾಸಿಯ ಮೇಲ್ಚಾವಣಿಯ ಮಧ್ಯಭಾಗದಲ್ಲಿ ಎಂಟು ಕಮಲಗಳಿಂದಾವೃತವಾದ ತಾಂಡವೇಶ್ವರನನ್ನು ಕೆತ್ತಲಾಗಿದೆ. ಗರ್ಭ ಗೃಹದ್ವಾರದ ಮೇಲ್ಭಾಗದಲ್ಲಿ ಗಜಲಕ್ಷ್ಮಿ ವಿಗ್ರಹವಿದೆ. ನವರಂಗದಲ್ಲಿರುವ ನಾಲ್ಕುಕಂಬಗಳ ಮೇಲಿರುವ ತೊಲೆಗಳ ಒಳಭಾಗದಲ್ಲಿ ಕಿರಾತಾರ್ಜನೀಯ, ಸಮುದ್ರಮಥನ ತಾಂಡವ ನೃತ್ಯ ಮತ್ತಿತರ ಪೌರಾಣಿಕ ಶಿಲ್ಪಗಳನ್ನು ಕೆತ್ತಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ